ಹುಬ್ಬಳ್ಳಿ: ಕಳಸಾ–ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ 2013ರಲ್ಲಿ ನಡೆದ ರೈಲು ತಡೆ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರೈತ ಹೋರಾಟಗಾರ ಕೊಡಿಹಳ್ಳಿ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿ ಆರ್ಪಿಎಫ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
2013ರಲ್ಲಿ ಕಳಸಾ–ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ರೈಲು ತಡೆ ಪ್ರತಿಭಟನೆ ನಡೆಸಿದ್ದರು. ಸುಮಾರು ಆರು ಗಂಟೆಗಳ ಕಾಲ ರೈಲು ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಲಾಗಿತ್ತು ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಆರ್ಪಿಎಫ್ ಠಾಣೆಯಲ್ಲಿ ಕೊಡಿಹಳ್ಳಿ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಮುಂದುವರಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರೆಂಟ್ ಜಾರಿಯಾಗಿತ್ತು ಎನ್ನಲಾಗಿದೆ.
ವಾರೆಂಟ್ ಆಧಾರದ ಮೇಲೆ ಇದೀಗ ಆರ್ಪಿಎಫ್ ಪೊಲೀಸರು ಬೆಂಗಳೂರಿನಲ್ಲಿ ಕೊಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿದ್ದು, ಇಂದು ಹುಬ್ಬಳ್ಳಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಹಳೆಯ ರೈಲು ತಡೆ ಪ್ರಕರಣದಲ್ಲಿ ನಡೆದಿರುವ ಈ ಬಂಧನ ಇದೀಗ ಹುಬ್ಬಳ್ಳಿಯಲ್ಲಿ ಕುತೂಹಲ ಮೂಡಿಸಿದೆ.