ಬೆಂಗಳೂರು: ಪೊಲೀಸ್ ಇಲಾಖೆಯನ್ನು ಹೆಚ್ಚು ಪರಿಣಾಮಕಾರಿ, ತ್ವರಿತ, ಪಾರದರ್ಶಕ ಮತ್ತು ಜನಸ್ನೇಹಿಯಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮೂರು ತಜ್ಞರ ಸಮಿತಿಗಳನ್ನು ರಚಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ತಿಳಿಸಿದ್ದಾರೆ.
ಪೊಲೀಸ್ ಸೇವೆಗಳ ಗುಣಮಟ್ಟ, ಇಲಾಖೆಯ ಆಧುನೀಕರಣ ಹಾಗೂ ಕೇಡರ್ ಮತ್ತು ನೇಮಕಾತಿ ವ್ಯವಸ್ಥೆಯನ್ನು ಸಮಿತಿಗಳು ಪರಿಶೀಲಿಸಲಿವೆ. ಎಫ್ಐಆರ್ ದಾಖಲಾತಿ, ದೂರುಗಳ ನಿರ್ವಹಣೆ, 112 ತುರ್ತು ಸೇವೆ, ಸೈಬರ್ ಅಪರಾಧ ದೂರುಗಳು, ಪೊಲೀಸ್ ಠಾಣೆಗಳ ಮೂಲಸೌಕರ್ಯ ಹಾಗೂ ನಾಗರಿಕರಿಗೆ ಸೇವೆ ಒದಗಿಸುವ ಕಾಲಮಿತಿಯ ಬಗ್ಗೆಯೂ ಮೊದಲ ಸಮಿತಿ ಪರಿಶೀಲಿಸಲಿದೆ.
ಎರಡನೇ ಸಮಿತಿ ಪೊಲೀಸ್ ಇಲಾಖೆಯ ತಾಂತ್ರಿಕ ಆಧುನೀಕರಣಕ್ಕೆ ಒತ್ತು ನೀಡಲಿದೆ. ಕೃತಕ ಬುದ್ಧಿಮತ್ತೆ (ಎಐ), ಸೈಬರ್ ಸಾಮರ್ಥ್ಯ, ವಿಧಿವಿಜ್ಞಾನ ಪ್ರಯೋಗಾಲಯಗಳು, ಸಂವಹನ ವ್ಯವಸ್ಥೆ, ವಾಹನಗಳು, ತರಬೇತಿ ಮತ್ತು ಆಧುನಿಕ ಕಾನೂನು ಸುವ್ಯವಸ್ಥೆ ಉಪಕರಣಗಳ ಕುರಿತು ಶಿಫಾರಸು ಮಾಡಲಿದೆ.

ಮೂರನೇ ಸಮಿತಿ ಪೊಲೀಸ್ ಕೇಡರ್, ಮಂಜೂರಾದ ಹುದ್ದೆಗಳು, ನೇಮಕಾತಿ ನಿಯಮಗಳು, ಅರ್ಹತೆ, ತರಬೇತಿ, ಬಡ್ತಿ, ಮೀಸಲಾತಿ ಹಾಗೂ ನೇರ ನೇಮಕಾತಿ ಮತ್ತು ಬಡ್ತಿ ಹುದ್ದೆಗಳ ಅನುಪಾತವನ್ನು ಪರಿಶೀಲಿಸಲಿದೆ.
ನಿವೃತ್ತ ಡಿಜಿಪಿಗಳಾದ ಆರ್.ಕೆ. ದತ್ತಾ, ಎಂ.ಎನ್. ರೆಡ್ಡಿ ಮತ್ತು ಕಮಲ್ ಪಂತ್ ಅವರು ಕ್ರಮವಾಗಿ ಮೂರು ಸಮಿತಿಗಳಿಗೆ ಅಧ್ಯಕ್ಷರಾಗಿದ್ದಾರೆ. ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗಳಿಗೆ ಸೂಚಿಸಲಾಗಿದೆ.
‘ಪೊಲೀಸ್ ವ್ಯವಸ್ಥೆಯ ಸುಧಾರಣೆ ಎಂದರೆ ಕೇವಲ ಇಲಾಖೆಯ ಆಂತರಿಕ ಬದಲಾವಣೆಗಳಲ್ಲ. ಸಾರ್ವಜನಿಕರಿಗೆ ದೊರೆಯುವ ಸೇವೆಗಳ ಗುಣಮಟ್ಟ ಸುಧಾರಿಸುವುದೂ ಇದರ ಉದ್ದೇಶ’ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.