ಹುಬ್ಬಳ್ಳಿ: ನೂತನ ಪೊಲೀಸ್ ಆಯುಕ್ತರಾಗಿ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಫೋಟೋವೊಂದು ಇದೀಗ ಹುಬ್ಬಳ್ಳಿ-ಧಾರವಾಡದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರನ್ನು ಖೇತ್ಸಿಂಗ್ ರಾಜಪುರೋಹಿತ ಎಂಬ ವ್ಯಕ್ತಿ ಹೂಗುಚ್ಛ ನೀಡಿ, ಶಾಲು ಹೊದಿಸಿ ಸನ್ಮಾನಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವ್ಯಕ್ತಿಯ ವಿರುದ್ಧ ಈ ಹಿಂದೆ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಎಂದು ವರದಿಯಾಗಿದ್ದು, ಇದೇ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಯುಕ್ತರ ಕಚೇರಿಗೆ ಪ್ರವೇಶ ಹೇಗೆ?
ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳ ಕಚೇರಿಗೆ ಭೇಟಿ ನೀಡುವವರ ಹಿನ್ನೆಲೆ ಹಾಗೂ ಅವರ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುವುದು ಇಲಾಖೆಯ ಪ್ರಮುಖ ಜವಾಬ್ದಾರಿ. ಹೀಗಿರುವಾಗ ಎನ್ಡಿಪಿಎಸ್ ಪ್ರಕರಣದ ಆರೋಪಿಯೆಂದು ಹೇಳಲಾಗುತ್ತಿರುವ ವ್ಯಕ್ತಿ ನೂತನ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಸನ್ಮಾನಿಸಲು ಅವಕಾಶ ಪಡೆದಿದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಇದೀಗ ವೈರಲ್ ಆಗಿರುವ ಫೋಟೋ ಪೊಲೀಸ್ ಇಲಾಖೆಯಲ್ಲೂ ಚರ್ಚೆಗೆ ಕಾರಣವಾಗಿದ್ದು, ಆಯುಕ್ತರ ಕಚೇರಿಗೆ ಇಂತಹ ವ್ಯಕ್ತಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಭದ್ರತಾ ಹಾಗೂ ಪರಿಶೀಲನಾ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಿತು? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಒಟ್ಟಿನಲ್ಲಿ, ನೂತನ ಪೊಲೀಸ್ ಆಯುಕ್ತರ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿನ ಈ ಫೋಟೋ ಇದೀಗ ಹುಬ್ಬಳ್ಳಿ-ಧಾರವಾಡದಲ್ಲಿ ‘ಆಯುಕ್ತರ ಕಚೇರಿಗೆ ಪ್ರವೇಶದ ಪರಿಶೀಲನೆ ಹೇಗಾಯಿತು?’ ಎಂಬ ಚರ್ಚೆಗೆ ವೇದಿಕೆಯಾಗಿದೆ.