ಹುಬ್ಬಳ್ಳಿ: ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಎರಡು ಗಣೇಶ ಮೆರವಣಿಗೆಗಳು ಮುಖಾಮುಖಿಯಾದ ಸಂದರ್ಭದಲ್ಲಿ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕನಿಷ್ಠ ಬಲಪ್ರಯೋಗದ ಮೂಲಕ ಯುವಕರನ್ನು ಚದುರಿಸಿದ ಘಟನೆ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ರಾತ್ರಿ ಸುಮಾರು 9.30ರ ವೇಳೆಗೆ, ನಗರದ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ರಸ್ತೆಯ ಸಮೀಪ ಮೇದಾರ್ ಓಣಿಯ ಗಣಪತಿ ಹಾಗೂ ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿವೆ.
ಈ ವೇಳೆ ಕಲಾಲ್ ಓಣಿಯ ಗಣಪತಿ ಮೆರವಣಿಗೆಯ ಡಿಜೆ ಮುಂಭಾಗದಲ್ಲಿ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
https://www.instagram.com/reel/DdNx_HAzKNa/?stkn=MWR2cnh3c3RlbzV2aQ==
ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದ್ದಾರೆ. 30 ಸೆಕೆಂಡ್ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಬಲಪ್ರಯೋಗ ಬಳಸಿ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ಅಲ್ಲಿಂದ ಚದುರಿಸಲಾಯಿತು. ಪೊಲೀಸರು ಲಾಠಿ ಹಿಡಿದು ಮುಂದಾಗುತ್ತಿದ್ದಂತೆ ಕೆಲ ಯುವಕರು ಸ್ಥಳದಿಂದ ದಿಕ್ಕಾಪಾಲಾಗಿ ಓಡಿದರು.
ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೆರವಣಿಗೆಗಳು ಶಾಂತಿಯುತವಾಗಿ ನಡೆಯುವಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೆರವಣಿಗೆಯ ವೇಳೆ ಅಶಾಂತಿ ಸೃಷ್ಟಿಸುವ ಅಥವಾ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.