ಹುಬ್ಬಳ್ಳಿ: ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆ, ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಹಾಗೂ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವದ ಮೆರವಣಿಗೆಗಳು ಶಾಂತಿಯುತವಾಗಿ ನಡೆಯಬೇಕು. ಆದರೆ ಯಾರೇ ಅಶಾಂತಿ ಸೃಷ್ಟಿಸಲು ಅಥವಾ ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೂ ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
“ಮೆರವಣಿಗೆಯಲ್ಲಿ ಯಾರೇ ತಂಟೆ ಮಾಡಿದರೂ ಬಿಡುವ ಪ್ರಶ್ನೆಯೇ ಇಲ್ಲ. ಡಿಜಿಟಲ್ ಸಾಕ್ಷ್ಯಗಳ ಮೂಲಕ ಕಿಡಿಗೇಡಿಗಳನ್ನು ಗುರುತಿಸಿ ಕೋರ್ಟ್ ಮೆಟ್ಟಿಲು ಹತ್ತಿಸುತ್ತೇವೆ” ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮಮೆರವಣಿಗೆ ವೇಳೆ ಮದ್ಯ ಅಥವಾ ಗಾಂಜಾ ಸೇವಿಸಿ ಬರುವುದು, ಆಯುಧಗಳನ್ನು ಇಟ್ಟುಕೊಂಡು ಬರುವುದು ಹಾಗೂ ಗದ್ದಲದ ಸಂದರ್ಭದಲ್ಲಿ ಮಹಿಳೆಯರನ್ನು ಚುಡಾಯಿಸುವುದು ಅಥವಾ ಅವರೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಗರದ ಐದು ಕಡೆ ಗಣೇಶ ಮೆರವಣಿಗೆಗಳು ನಡೆದಿದ್ದು, ಬಹುತೇಕ ಕಡೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆದಿವೆ. ಆದರೆ ಮರಾಠ ಓಣಿಯಲ್ಲಿ ಕೆಲ ಯುವಕರು ಗಲಾಟೆ ನಡೆಸಿದ ಘಟನೆ ನಡೆದಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
https://www.instagram.com/reel/DdOFYBHyvEU/?stkn=OW94enpzc2hwdmY0
ಮಹಿಳೆಯರು ನಿಂತಿದ್ದ ಸ್ಥಳದಲ್ಲಿ ಕೆಲ ಯುವಕರು ಕೆಟ್ಟ ಉದ್ದೇಶದಿಂದ ಅವರತ್ತ ತೆರಳಲು ಹಾಗೂ ಅಸಭ್ಯವಾಗಿ ವರ್ತಿಸಲು ಮುಂದಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಯುವಕರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಕೆಲವರು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಭೂಷಣ್ ಬೋರಸೆ ತಿಳಿಸಿದ್ದಾರೆ.
ಸಿಸಿ ಕ್ಯಾಮೆರಾ, ಡ್ರೋನ್ಗಳಿಂದ ಕಣ್ಗಾವಲು
ಘಟನೆ ನಡೆದ ಸ್ಥಳಗಳಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಡಿಜಿಟಲ್ ಸಾಕ್ಷ್ಯಗಳ ಆಧಾರದಲ್ಲಿ ಗಲಾಟೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಗಣೇಶೋತ್ಸವದ ಭದ್ರತೆಗಾಗಿ ನಗರದಾದ್ಯಂತ ಸಿಸಿ ಕ್ಯಾಮೆರಾ ಹಾಗೂ ಡ್ರೋನ್ಗಳ ಮೂಲಕ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.ಹಬ್ಬದ ಸಂಭ್ರಮಕ್ಕೆ ಯಾವುದೇ ಧಕ್ಕೆ ಬರದಂತೆ ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕು. ಆದರೆ ಶಾಂತಿ ಕದಡುವುದು, ಮಹಿಳೆಯರಿಗೆ ಕಿರುಕುಳ ನೀಡುವುದು ಅಥವಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಯಾವುದೇ ಪ್ರಯತ್ನದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಪೊಲೀಸ್ ಇಲಾಖೆ ನೀಡಿದೆ.