ಹುಬ್ಬಳ್ಳಿ: ಅವಳಿ ನಗರದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆಯ ಹಾವಳಿಗೆ ಕಡಿವಾಣ ಹಾಕಲು ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಸಮರ ಸಾರಿದ್ದಾರೆ. ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲವನ್ನು ಪತ್ತೆಹಚ್ಚಿ ಮಟ್ಟಹಾಕುವ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ ತಂಡ ಇದೀಗ ನಗರದ ಕೃಪಾ ನಗರದಲ್ಲಿ ದಾಳಿ ನಡೆಸಿ ಮಹತ್ವದ ಯಶಸ್ಸು ಸಾಧಿಸಿದೆ.
ನಗರದ ಮಂಟೂರ ರೋಡ್ ಕೃಪಾ ನಗರದ ಮನೆಯೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಹಿರಾ ಹಸನ್ ಶೇಖ್ ಹಾಗೂ ಯುವಕ ಅರ್ಮಾನ್ ಹಸನ್ ಶೇಖ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿತರಿಂದ ಸುಮಾರು 1.5 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸಿಸಿಬಿ ಪೊಲೀಸರು ವಿಶೇಷ ನಿಗಾ ವಹಿಸಿದ್ದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಜಾಲವನ್ನು ಪತ್ತೆಹಚ್ಚಿ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಚುರುಕಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಅವರ ಆದೇಶದ ಮೇರೆಗೆ, ಡಿಸಿಪಿ ಶೃತಿ ಹಾಗೂ ರವೀಶ್ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಎಸಿಪಿ ಶಿವಪ್ರಕಾಶ್ ನಾಯ್ಕ್ ಅವರ ನೇತೃತ್ವದಲ್ಲಿ ಹಾಗೂ ಸಿಸಿಬಿ ಇನ್ಸ್ಪೆಕ್ಟರ್ ದಯಾನಂದ್ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಈ ಕಾರ್ಯಾಚರಣೆಯಲ್ಲಿ ಎನ್ ಎಂ ಪಾಟೀಲ್, ಉಮೇಶ್ ಹೆಡ್ಡೇರಿ, ದಾನೇಶ್ ಮಾಂಗ್, ಸಾಗರ್, ಶಂಭು, ವಾಸಿ ಮಂಜುಳಾ, ಸುನಿಲ್ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಗಿರೀಶ್ ಬಡಿಗೇರ, ಮಾರುತಿ ಬಜಂತ್ರಿ ಹಾಗೂ ಮುತ್ತು ಪಾಟೀಲ್ ಸೇರಿದಂತೆ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಸಿಸಿಬಿ ಪೊಲೀಸರು ನಡೆಸುತ್ತಿರುವ ನಿರಂತರ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಘಟಿತವಾಗಿ ಕಾರ್ಯನಿರ್ವಹಿಸಿ, ಮಾದಕ ವಸ್ತುಗಳ ಜಾಲದ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುತ್ತಿರುವ ಸಿಸಿಬಿ ತಂಡದ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಯುವಜನತೆಯ ಭವಿಷ್ಯವನ್ನು ಮಾದಕ ವಸ್ತುಗಳ ದುಷ್ಪರಿಣಾಮದಿಂದ ರಕ್ಷಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಈ ಪ್ರಯತ್ನ ಮಹತ್ವದ್ದಾಗಿದೆ. ಹುಬ್ಬಳ್ಳಿ-ಧಾರವಾಡವನ್ನು ಮಾದಕ ವಸ್ತು ಮುಕ್ತ ಅವಳಿ ನಗರವನ್ನಾಗಿಸುವ ಗುರಿಯೊಂದಿಗೆ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಸದ್ಯ ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.