ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಗಬ್ಬೂರು ಬಳಿಯ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರವನ್ನು ಮೂವರು ಮುಸುಕುಧಾರಿ ದರೋಡೆಕೋರರು ಟಾರ್ಗೆಟ್ ಮಾಡಿ, ಸುಮಾರು ₹50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ರಾತ್ರಿ ವೇಳೆ ಮಂದಿರಕ್ಕೆ ನುಗ್ಗಿದ ಆರೋಪಿಗಳು ರಾಡ್ ಬಳಸಿ ದ್ವಾರವನ್ನು ಮುರಿದು ಒಳಪ್ರವೇಶಿಸಿದ್ದಾರೆ. ಬಳಿಕ ದೇವರ ತಲೆಯ ಮೇಲಿದ್ದ ಕಿರೀಟ, ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿದ್ದಾರೆ. ಕಳ್ಳತನದ ವೇಳೆ ದೇವರ ಮೂರ್ತಿಗೂ ಹಾನಿ ಮಾಡಿ ವಿಕೃತಿ ಮೆರೆದಿರುವುದು ಭಕ್ತರಲ್ಲಿ ತೀವ್ರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಈ ಜೈನ ಮಂದಿರದಲ್ಲಿ ಕಳ್ಳತನ ನಡೆದಿರುವುದು ಇದೇ ಮೊದಲಲ್ಲ ಎಂಬುದು ಮತ್ತಷ್ಟು ಆತಂಕಕಾರಿ ಸಂಗತಿ. ಮೂರನೇ ಬಾರಿಗೆ ಇದೇ ಮಂದಿರವನ್ನು ದರೋಡೆಕೋರರು ಗುರಿಯಾಗಿಸಿದ್ದಾರೆ. ಹಿಂದೆಯೂ 2025ರಲ್ಲಿ ಗುಜರಾತ್ ಮೂಲದ ಆರೋಪಿಗಳು ಮಂದಿರದಲ್ಲಿ ಕಳ್ಳತನ ನಡೆಸಿದ್ದರು.
ಆ ಪ್ರಕರಣದಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆಹಚ್ಚಿ ಕರೆತಂದಿತ್ತು. ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿ, ಕಾಲಿಗೆ ಗುಂಡೇಟು ಬಿದ್ದ ಬಳಿಕ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎಂದು ತಿಳಿದುಬಂದಿದೆ.
ಇಷ್ಟೆಲ್ಲಾ ನಡೆದಿದ್ದರೂ ಮಂದಿರದಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸತತ ಮೂರನೇ ಬಾರಿ ಕಳ್ಳತನ ನಡೆದಿರುವುದು, ಭದ್ರತಾ ಸಿಬ್ಬಂದಿ ಹಾಗೂ ಸುರಕ್ಷತಾ ವ್ಯವಸ್ಥೆಯ ಕೊರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಮಂದಿರವನ್ನೇ ಮರುಮರು ಟಾರ್ಗೆಟ್ ಮಾಡುತ್ತಿರುವ ಕಳ್ಳರ ಜಾಲದ ಹಿಂದೆ ಯಾರಿದ್ದಾರೆ? ಈ ದರೋಡೆಯ ಮಾಸ್ಟರ್ಮೈಂಡ್ ಯಾರು? ಎಂಬ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.
ಘಟನೆಯಿಂದ ಜೈನ ಸಮುದಾಯ ಮಾತ್ರವಲ್ಲದೆ, ನಗರದ ಸಾರ್ವಜನಿಕರಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ.