ಹುಬ್ಬಳ್ಳಿ: ನಗರದಲ್ಲಿ ಅಪರಾಧ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಆತಂಕದ ನಡುವೆಯೇ, ಬೆಳಿಗ್ಗೆ ಹಾಡಹಗಲೇ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ.
ನಗರದ ಯಲ್ಲಾಪುರ ಓಣಿಯ ಎಂ.ಡಿ. ಕಾಲೇಜು ಹಾಗೂ ಬಾದಾಮಿ ಕ್ಲಿನಿಕ್ ಸಮೀಪ ಬೆಳಿಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ತೋಹೀದ್ ಮಿರ್ಜಾ ನೀಡಿರುವ ಮಾಹಿತಿಯ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಗಲಾಟೆಯ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಫ್ತಾಬ್ ಹಾಗೂ ಆತನ ತಂಡ ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿತ್ತು ಎಂದು ಆರೋಪಿಸಿದ್ದಾನೆ.
ತೋಹೀದ್ ಕೆಲಸಕ್ಕೆ ತೆರಳಲು ತನ್ನ ವಾಹನ ತೆಗೆಯುತ್ತಿದ್ದ ವೇಳೆ, ಏಕಾಏಕಿ ಆಟೋವೊಂದನ್ನು ಅಡ್ಡವಾಗಿ ನಿಲ್ಲಿಸಿ ದಾರಿ ತಡೆದ ಆರೋಪಿಗಳು, ಕೈಯಲ್ಲಿ ಸ್ಟಿಕ್ ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆಟೋದಲ್ಲಿ ಇಮ್ರಾನ್ ಎಂಬಾತ ಕುಳಿತಿದ್ದ ಹಾಗೂ 4 ರಿಂದ 5 ಮಂದಿ ಎರಡು ಬೈಕ್ಗಳಲ್ಲಿ ಸ್ಥಳಕ್ಕೆ ಬಂದಿದ್ದರು ಎಂದು ತೋಹೀದ್ ಆರೋಪಿಸಿದ್ದಾನೆ.
ಹಲ್ಲೆಯಲ್ಲಿ ಗಾಯಗೊಂಡ ತೋಹೀದ್ ಮಿರ್ಜಾ ನನ್ನು ಆತನ ಸ್ನೇಹಿತರು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ವಿಷಯ ತಿಳಿದು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ಆರ್. ನಾಯ್ಕ್ ಅವರು ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಮತ್ತೆ ಹೆಚ್ಚುತ್ತಿರುವ ಕ್ರೈಂ ಪ್ರಕರಣಗಳ ನಡುವೆ, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರ ಕ್ರಮ ಮತ್ತಷ್ಟು ಬಿಗಿಯಾಗಬೇಕಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.