ಹುಬ್ಬಳ್ಳಿ: 2013ರ ಕಳಸಾ–ಬಂಡೂರಿ ಹೋರಾಟದ ಸಂದರ್ಭದಲ್ಲಿ ರೈಲು ತಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಅವರಿಗೆ ಹುಬ್ಬಳ್ಳಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಹುಬ್ಬಳ್ಳಿ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜೆ ಅವರು ಸೋಮವಾರ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಕೊಡಿಹಳ್ಳಿ ಚಂದ್ರಶೇಖರ್ ಪರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದರು.
ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಕೊಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ಎಲ್ಲಾ ಹೋರಾಟಗಾರರನ್ನು ನ್ಯಾಯಾಲಯ ಗೌರವದಿಂದ ಕಾಣುತ್ತದೆ. ಅದೇ ರೀತಿ ಎಲ್ಲಾ ಹೋರಾಟಗಾರರು ಮೊದಲು ನ್ಯಾಯಾಲಯಕ್ಕೆ ಗೌರವ ನೀಡಬೇಕು. ಕಾನೂನಿಗೆ ಗೌರವ ನೀಡದವರು ಹೋರಾಟಗಾರರೇ ಅಲ್ಲ” ಎಂದು ನ್ಯಾಯಾಧೀಶರು ತಿಳಿಸಿದರು.
ಇದೇ ವೇಳೆ, 2019ರಿಂದ ಈ ಪ್ರಕರಣದ ವಿಚಾರಣೆಗೆ ಕೊಡಿಹಳ್ಳಿ ಚಂದ್ರಶೇಖರ್ ಹಾಜರಾಗಿಲ್ಲ ಎಂದು ನ್ಯಾಯಾಧೀಶರು ಗಮನಿಸಿದರು. ಇದೀಗ ಮತ್ತೆ ಜಾಮೀನು ನೀಡಿದರೆ ಮುಂದಿನ ಐದು ವರ್ಷಗಳ ಕಾಲ ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿರುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2013ರಲ್ಲಿ ಕಳಸಾ–ಬಂಡೂರಿ ಯೋಜನೆಗೆ ಆಗ್ರಹಿಸಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ ರೈಲು ತಡೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಹಲವು ವರ್ಷಗಳ ಬಳಿಕ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕೊಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿ ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯದ ಆದೇಶದ ಬಳಿಕ ಕೊಡಿಹಳ್ಳಿ ಚಂದ್ರಶೇಖರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.