ಹುಬ್ಬಳ್ಳಿ: ಆಟೋ ರಿಕ್ಷಾದಲ್ಲಿ ಕಳೆದುಕೊಂಡಿದ್ದ ಸುಮಾರು ₹3 ಲಕ್ಷ ಮೌಲ್ಯದ ಐಪ್ಯಾಡ್ ಸೇರಿದಂತೆ ಆ್ಯಪಲ್ ಕಂಪನಿಯ ಉತ್ಪನ್ನಗಳನ್ನು ಕೇವಲ ಐದು ಗಂಟೆಗಳಲ್ಲಿ ಪತ್ತೆಹಚ್ಚಿದ ಗೋಕುಲ ರಸ್ತೆ ಠಾಣೆ ಪೊಲೀಸರ ಕಾರ್ಯಕ್ಕೆ ಚೆನ್ನೈ ಮೂಲದ ವಕೀಲ ಅರವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮ್ಮೇಳನವೊಂದರಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಅರವಿಂದ್ ಅವರು ಆಟೋ ರಿಕ್ಷಾದಲ್ಲಿ ತಮ್ಮ ಬ್ಯಾಗ್ ಕಳೆದುಕೊಂಡಿದ್ದರು. ತಕ್ಷಣ ಗೋಕುಲ ರಸ್ತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ವಿಳಂಬ ಮಾಡದೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಗೋಕುಲ ರೋಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಸಂ ಸಂಗಮೇಶ ಅವರ ನೇತೃತ್ವದಲ್ಲಿ ಪೊಲೀಸ್ ಕ್ರೈಮ್ ಸಿಬ್ಬಂದಿ ರುದ್ರಪ್ಪ ಹೊರಟ್ಟಿ ಅವರು ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗಿ, ಸಮಯಪ್ರಜ್ಞೆ ಹಾಗೂ ವೃತ್ತಿಪರ ತನಿಖೆಯ ಮೂಲಕ ಕೇವಲ ಕೆಲವೇ ಗಂಟೆಗಳಲ್ಲಿ ಸುಮಾರು ₹3 ಲಕ್ಷ ಮೌಲ್ಯದ ಐಪ್ಯಾಡ್ ಹಾಗೂ ಇತರೆ ಆ್ಯಪಲ್ ಉತ್ಪನ್ನಗಳನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಕೀಲ ಅರವಿಂದ್, “ಗೋಕುಲ ರಸ್ತೆ ಪೊಲೀಸರ ಕಾರ್ಯದಿಂದ ಪೊಲೀಸರ ಮೇಲಿನ ನಂಬಿಕೆ ಹೆಚ್ಚಾಗಿದೆ” ಎಂದು ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಅವರಿಗೆ ಸಂದೇಶದ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. ಅಲ್ಲದೇ ತನಿಖಾಧಿಕಾರಿ ಸಂಗಮೇಶ್, ಕ್ರೈಮ್ ಸಿಬ್ಬಂದಿ ರುದ್ರಪ್ಪ ಹಾಗೂ ಇಡೀ ಪೊಲೀಸ್ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಅವರ ಆಡಳಿತದಲ್ಲಿ ಇಂತಹ ಕ್ಷಿಪ್ರ ಹಾಗೂ ಜನಸ್ನೇಹಿ ಪೊಲೀಸ್ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂಬ ನಿರೀಕ್ಷೆ ಹುಬ್ಬಳ್ಳಿ–ಧಾರವಾಡ ಜನತೆಯಲ್ಲಿದೆ. “ಒರಿಜಿನಲ್ ಪೊಲೀಸಿಂಗ್ ಅಂದರೆ ಬೊರಸೆ ಭೂಷಣ್” ಎಂಬ ಮಾತು ಕಾರ್ಯಕ್ಷೇತ್ರದಲ್ಲೂ ಸಾಕಾರವಾಗುತ್ತದೆಯೇ ಎಂಬುದನ್ನು ಜನತೆ ಕಾದು ನೋಡುತ್ತಿದ್ದಾರೆ.