ಹುಬ್ಬಳ್ಳಿ: ಕರ್ತವ್ಯ ಎಂದರೆ ಕೇವಲ ಸಂಚಾರ ನಿಯಂತ್ರಣವಲ್ಲ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದೂ ಪೊಲೀಸರ ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿಯ ಟ್ರಾಫಿಕ್ ಸಿಬ್ಬಂದಿಯೊಬ್ಬರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಅಣ್ಣಿಗೇರಿಯಿಂದ ಆಗಮಿಸಿದ್ದ ನಿಸಾರ್ ಅಹ್ಮದ್ ಎಂಬ ವ್ಯಕ್ತಿ ಬಸವನಗರ ಕ್ರಾಸ್ ಬಳಿ ತನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದ. ಮೊಬೈಲ್ ಕಳೆದುಕೊಂಡಿರುವುದು ಗಮನಕ್ಕೆ ಬಂದ ಬಳಿಕ, ಅದೇ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಸಿಬ್ಬಂದಿ ಕಲ್ಲಪ್ಪ ಬೀರನೂರ ಅವರಿಗೆ ಮಾಹಿತಿ ನೀಡಿದ್ದಾನೆ.

ನಿಸಾರ್ ಅಹ್ಮದ್ ಮನವಿಗೆ ಕೂಡಲೇ ಸ್ಪಂದಿಸಿದ ಕಲ್ಲಪ್ಪ ಬೀರನೂರ ಮೊಬೈಲ್ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ತಾಂತ್ರಿಕ ವಿಭಾಗದ ನೆರವು ಪಡೆದು ಮೊಬೈಲ್ನ ಸ್ಥಳವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಮೊಬೈಲ್ನ್ನು ವಾರಸುದಾರ ನಿಸಾರ್ ಅಹ್ಮದ್ ಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಮೊಬೈಲ್ ಕಳೆದುಕೊಂಡು ಆತಂಕದಲ್ಲಿದ್ದ ವ್ಯಕ್ತಿಗೆ ತಕ್ಷಣ ಸ್ಪಂದಿಸಿ, ತಾಂತ್ರಿಕ ನೆರವಿನ ಮೂಲಕ ಮೊಬೈಲ್ ಪತ್ತೆಹಚ್ಚಿ ಮರಳಿ ನೀಡಿದ ಟ್ರಾಫಿಕ್ ಸಿಬ್ಬಂದಿ ಕಲ್ಲಪ್ಪ ಬೀರನೂರ ಅವರ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
“ಪೊಲೀಸರು ಜನರೊಂದಿಗೆ ಇದ್ದಾರೆ” ಎಂಬ ವಿಶ್ವಾಸ ಮೂಡಿಸುವ ಇಂತಹ ಕಾರ್ಯಗಳು ಜನಸ್ನೇಹಿ ಪೊಲೀಸಿಂಗ್ಗೆ ನಿಜವಾದ ಅರ್ಥ ನೀಡುತ್ತವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.