ಹುಬ್ಬಳ್ಳಿ: ಸಾಲದ ಅಗತ್ಯವಿದ್ದಾಗ ಹಣ ನೀಡುವುದು, ಬಳಿಕ ಅತಿಯಾದ ಬಡ್ಡಿ ವಸೂಲಿ, ನಿರಂತರ ಒತ್ತಡ ಹಾಗೂ ಬೆದರಿಕೆ, ಇಂತಹ ಆರೋಪಗಳ ನಡುವೆ ಹುಬ್ಬಳ್ಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆ ಮತ್ತೆ ಚರ್ಚೆಗೆ ಬಂದಿದೆ. ಸಾಲದ ಹಣದ ಕಿರುಕುಳಕ್ಕೆ ಸಿಲುಕಿ ಜನರು ಮಾನಸಿಕವಾಗಿ ಕುಗ್ಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಇತ್ತೀಚೆಗೆ ಹುಬ್ಬಳ್ಳಿಯ ಬಿಡ್ನಾಳ್ ಬಸವನಗರದ ಅಂಚಟಗೇರಿ ಪ್ಲಾಟ್ ನಿವಾಸಿ 32 ವರ್ಷದ ಸುಲೇಮಾನ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೂ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸ್ ದಾಖಲೆಯ ಪ್ರಕಾರ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬದವರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೂ ಅಕ್ರಮ ಬಡ್ಡಿ ದಂಧೆಗೂ ನೇರ ಸಂಬಂಧವಿದೆ ಎಂಬುದು ತನಿಖೆಯಿಂದ ದೃಢಪಟ್ಟಿಲ್ಲ. ಆದರೆ ಸಾಲದ ಒತ್ತಡ ಮತ್ತು ಅದರ ಪರಿಣಾಮಗಳ ಕುರಿತು ಈ ಘಟನೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಹಿಂದೆ ಕೂಡ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯಾಚರಣೆಗಳು ನಡೆದಿವೆ. 2024ರಲ್ಲಿ ಪೊಲೀಸರು ಮೀಟರ್ ಬಡ್ಡಿ ವ್ಯವಹಾರ, ಬೆದರಿಕೆ ಹಾಗೂ ಸಾಲ ವಸೂಲಿಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಹಲವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾಗಿ ವರದಿಯಾಗಿತ್ತು. 2025ರಲ್ಲಿ ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೂಡ ಸಾಲ ಪಡೆದ ವ್ಯಕ್ತಿಗೆ ಅಸಲು-ಬಡ್ಡಿ ಹೆಸರಿನಲ್ಲಿ ಹೆಚ್ಚಿನ ಮೊತ್ತ ಪಾವತಿಸುವಂತೆ ಒತ್ತಾಯಿಸಿ, ಜೀವ ಬೆದರಿಕೆ ಹಾಗೂ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಪ್ರಕರಣವೂ ದಾಖಲಾಗಿತ್ತು. ಈ ಎಲ್ಲ ಕಾರ್ಯಾಚರಣೆಗಳು ಪ್ರಕರಣಗಳು ಬರಿ ನಾಮಕಾವಸ್ಥೆಗೆ ಮಾಡಿರುವ ಹಾಗೆ ನಡೆದಿದ್ದವು.
ಸಾಲ ಕೊಡುವುದು ಬೇರೆ, ಸುಲಿಗೆ ಮಾಡುವುದು ಬೇರೆ!
ಅಗತ್ಯದ ಸಂದರ್ಭದಲ್ಲಿ ಹಣ ನೀಡುವ ಹೆಸರಿನಲ್ಲಿ ಜನರನ್ನು ಸಾಲದ ಸುಳಿಗೆ ತಳ್ಳುವುದು, ಅತಿಯಾದ ಬಡ್ಡಿ ವಿಧಿಸುವುದು, ಅಸಲುಗಿಂತ ಹಲವು ಪಟ್ಟು ಹಣ ವಸೂಲಿ ಮಾಡಲು ಒತ್ತಡ ಹೇರುವುದು ಅಥವಾ ಬೆದರಿಕೆ ಹಾಕುವುದು ನಡೆದಿದ್ದರೆ ಅಂತಹ ಪ್ರಕರಣಗಳ ವಿರುದ್ಧ ಕಾನೂನು ಕ್ರಮ ಅಗತ್ಯ. ಸಾಲ ಪಡೆದವರ ದೌರ್ಬಲ್ಯವನ್ನು ಬಳಸಿಕೊಂಡು ಮಾನಸಿಕ ಒತ್ತಡ ಹೇರುವ ಯಾವುದೇ ರೀತಿಯ ದಂಧೆಗೆ ಕಡಿವಾಣ ಬೀಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪೊಲೀಸರು ತನಿಖೆ ನಡೆಸಲಿ; ದಂಧೆಕೋರರ ಮೇಲೆ ಕ್ರಮವಾಗಲಿ..
ಹುಬ್ಬಳ್ಳಿ ನಗರದಲ್ಲಿ ಬಡ್ಡಿ ದಂಧೆ ನಡೆಸುತ್ತಿರುವವರ ಕುರಿತು ಸಾರ್ವಜನಿಕರಿಂದ ದೂರುಗಳು ಅಥವಾ ಮಾಹಿತಿ ಬಂದಲ್ಲಿ, ಪೊಲೀಸ್ ಇಲಾಖೆ ಅವುಗಳನ್ನು ಗಂಭೀರವಾಗಿ ಪರಿಶೀಲಿಸಿ ಹಣದ ವಹಿವಾಟು, ಬಡ್ಡಿ ದಾಖಲೆಗಳು, ಬೆದರಿಕೆ ಹಾಗೂ ವಸೂಲಿ ವಿಧಾನಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಅಕ್ರಮ ಬಡ್ಡಿ ದಂಧೆಯಲ್ಲಿ ಯಾರೇ ಭಾಗಿಯಾಗಿದ್ದರೂ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ಸಾಲದ ಸುಳಿಗೆ ಸಿಲುಕಿದವರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ಬಡ್ಡಿ ದಂಧೆಕೋರರ ಕಿರುಕುಳದ ಬಗ್ಗೆ ದೂರು ನೀಡಲು ಜನರು ಮುಂದೆ ಬರಬೇಕು; ಪೊಲೀಸರು ಅಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು” ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.