ಹುಬ್ಬಳ್ಳಿ: ಕೊರಿಯರ್ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ನಲ್ಲಿದ್ದ ಗಂಡ–ಹೆಂಡತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ–ಗದಗ ಬೈಪಾಸ್ನಲ್ಲಿ ನಡೆದಿದೆ.
ಮೃತರನ್ನು ಜಯರಾಜನಗರ ನಿವಾಸಿಗಳಾದ ರಜನಿ ತಿಕಲಾ ಹಾಗೂ ಅವರ ಪತಿ ಸುಕುಮಾರ ತಿಕಲಾ ಎಂದು ಗುರುತಿಸಲಾಗಿದೆ. ರಜನಿ ತಿಕಲಾ ಅವರು ಶಕುಂತಲಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಪತ್ನಿ ರಜನಿ ಅವರನ್ನು ಪತಿ ಸುಕುಮಾರ ಅವರು ಬೈಕ್ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಮುಂದಿನಿಂದ ಬಂದ ಕೊರಿಯರ್ ಗೂಡ್ಸ್ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಗಂಡ–ಹೆಂಡತಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಪೂರ್ವ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದ್ದು, ಕೊರಿಯರ್ ವಾಹನದ ಚಾಲಕ ಹಾಗೂ ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಈ ಸಂಬಂಧ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.