ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡುತ್ತಿದ್ದ ಆರೋಪದಡಿ 35 ವರ್ಷದ ಮಾಜಿದ್ ನದಾಫ್ ಎಂಬಾತನನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಛಬ್ಬಿ ಪ್ಲಾಟ್ ನೇಕಾರನಗರ ಹಳೇ ಹುಬ್ಬಳ್ಳಿ ನಿವಾಸಿ ಎನ್ನಲಾದ ಮಾಜಿದ್, ಶಾಲೆಯೊಂದರ ಪಕ್ಕದಲ್ಲೇ ವಾಸವಾಗಿದ್ದ ಎನ್ನಲಾಗಿದೆ. ಅಪ್ರಾಪ್ತ ಬಾಲಕಿ ಶಾಲೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ಪುಸಲಾಯಿಸಿ ಮನೆಗೆ ಕರೆದೊಯ್ದು ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದನೆಂಬ ಆರೋಪ ಕೇಳಿಬಂದಿದೆ.

ಬಾಲಕಿ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ ಎಂಬುದನ್ನು ಗಮನಿಸಿದ ಶಿಕ್ಷಕರು ಈ ಕುರಿತು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ, ಮಾಜಿದ್ ಮಾಡುತ್ತಿದ್ದ ಕೃತ್ಯದ ಕುರಿತು ಆಕೆ ಮಾಹಿತಿ ನೀಡಿದ್ದಾಳೆ.
ವಿಷಯ ತಿಳಿದ ಪೋಷಕರು ಹಾಗೂ ಸ್ಥಳೀಯರು ಆರೋಪಿಯನ್ನು ವಿಚಾರಿಸಿ, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು ಮಾಜಿದ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಪೋಷಕರೇ ಎಚ್ಚರ ಮಕ್ಕಳ ಮೇಲೆ ಇರಲಿ ನಿಗಾ..

ಅಪ್ರಾಪ್ತ ಮಕ್ಕಳೊಂದಿಗೆ ಪೋಷಕರು ಪ್ರತಿದಿನ ಮುಕ್ತವಾಗಿ ಮಾತನಾಡುವುದು ಅತ್ಯಂತ ಅಗತ್ಯ. ಮಕ್ಕಳ ವರ್ತನೆಯಲ್ಲಿ ಬದಲಾವಣೆ, ಶಾಲೆಗೆ ಹೋಗಲು ಹಿಂಜರಿಕೆ ಅಥವಾ ಯಾರಾದರೂ ವ್ಯಕ್ತಿಯ ಬಗ್ಗೆ ಭಯ ವ್ಯಕ್ತಪಡಿಸುವುದು ಕಂಡುಬಂದರೆ ನಿರ್ಲಕ್ಷಿಸದೆ ವಿಚಾರಿಸಬೇಕು.
ಮಕ್ಕಳಿಗೆ ಭಯವಲ್ಲ, ಧೈರ್ಯ ನೀಡಿ ಮಾತನಾಡುವ ವಾತಾವರಣ ಕಲ್ಪಿಸಿ. ಮಕ್ಕಳ ಸುರಕ್ಷತೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದು.