ಧಾರವಾಡ: ಮಾದಕ ವಸ್ತುಗಳ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ.
ಧಾರವಾಡದ ಶಿವಗಿರಿ ಲಾಸ್ಟ್ ಬಸ್ಸ್ಟಾಪ್ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಸೋಹೇಲ್ ಹುಸೇನಸಾಬ್ ಮಕಾಂದಾರ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯಿಂದ 755 ಗ್ರಾಂ ಗಾಂಜಾ, ಅಂದಾಜು ₹39,400 ಮೌಲ್ಯದ ಮಾದಕ ವಸ್ತು, ₹5,600 ನಗದು ಹಾಗೂ ಸುಮಾರು ₹15,000 ಮೌಲ್ಯದ ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹58,400 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ದಾಖಲೆ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಪು @ ಮುಹಮ್ಮದ್ ಇರಾಣಿ ಹಾಗೂ ಪುರಖಾನ ಬೇಪಾರಿ ಎಂಬುವವರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ–1985ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಎಸಿಪಿ ಶಿವಪ್ರಕಾಶ್ ನಾಯಕ ಅವರ ನೇತೃತ್ವದಲ್ಲಿ, ಸಿಸಿಬಿ ಇನ್ಸ್ಪೆಕ್ಟರ್ ರಮೇಶ್ ಕಾಂಬಳೆ ಹಾಗೂ ಸಿಬ್ಬಂದಿಗಳಾದ ಶಂಕರಗೌಡ ಪಾಟೀಲ, ಮೆಹಬೂಬ್ ನದಾಫ್, ಭೀಮಪ್ಪ ಪಠಾತ, ಮಹಾಂತೇಶ ಮಾದರ, ಸಾಗರ ಕುಂಕುಮಗಾರ ಭಾಗವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟಕ್ಕೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿ ತಿಳಿದುಬಂದಿದೆ.