ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ನಕಲಿ ಔಷಧ ಜಾಲದ ಪ್ರಕರಣದ ತನಿಖೆಯನ್ನು ಎಸ್ಐಟಿ ಮತ್ತಷ್ಟು ಚುರುಕುಗೊಳಿಸಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡೇರಿ ಗ್ರಾಮದ ಫಾರ್ಮ್ಹೌಸ್ನಲ್ಲಿ ಪತ್ತೆಯಾಗಿದ್ದ ನಕಲಿ ಔಷಧ ತಯಾರಿಕೆ ಹಾಗೂ ರೀ-ಪ್ಯಾಕಿಂಗ್ ಜಾಲದ ಬೆನ್ನುಬಿದ್ದಿರುವ ವಿಶೇಷ ತನಿಖಾ ತಂಡ, ಪ್ರಕರಣದ ಸಂಪರ್ಕಗಳನ್ನು ಪತ್ತೆಹಚ್ಚಲು ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದೆ.
ಸುಮಾರು ₹4.91 ಕೋಟಿ ಮೌಲ್ಯದ ನಕಲಿ ಹಾಗೂ ಮರುಲೇಬಲ್ ಮಾಡಲಾದ ಔಷಧಗಳನ್ನು ಬಿದದಿ ಸಮೀಪದ ಅಕ್ರಮ ಘಟಕದಿಂದ ವಶಪಡಿಸಿಕೊಳ್ಳಲಾಗಿತ್ತು. ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನಲ್ಲಿ ಕಡಿಮೆ ಬೆಲೆಯ ಔಷಧಗಳನ್ನು ಮರುಪ್ಯಾಕ್ ಮಾಡಿ ಮಾರುಕಟ್ಟೆಗೆ ಹಾಗೂ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿತ್ತು ಎಂಬ ಆರೋಪ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಜಾಲ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಅಂತರರಾಜ್ಯ ಹಾಗೂ ದೇಶವ್ಯಾಪಿ ಸಂಪರ್ಕ ಹೊಂದಿರುವ ಸಾಧ್ಯತೆ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ. ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಔಷಧಗಳನ್ನು ಪಡೆದು, ಪ್ರತಿಷ್ಠಿತ ಬ್ರ್ಯಾಂಡ್ಗಳ ಹೆಸರಿನಲ್ಲಿ ಮರುಲೇಬಲ್ ಮಾಡಿ ಮಾರಾಟ ಮಾಡಲಾಗುತ್ತಿತ್ತೆಂಬ ಮಾಹಿತಿ ತನಿಖೆಯ ದಿಕ್ಕನ್ನು ಮತ್ತಷ್ಟು ವಿಸ್ತರಿಸಿದೆ.
ಈ ಪ್ರಕರಣದ ಸಮಗ್ರ ತನಿಖೆಗಾಗಿ ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿ ಸಿ. ವಂಶಿಕೃಷ್ಣ ನೇತೃತ್ವದಲ್ಲಿ ಆರು ಸದಸ್ಯರ ಎಸ್ಐಟಿ ರಚಿಸಿದೆ. ಪೊಲೀಸ್ ಹಾಗೂ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತಂಡದಲ್ಲಿದ್ದು, ತಾವರೆಕೆರೆ ಪ್ರಕರಣದ ಜೊತೆಗೆ ರಾಜ್ಯದ ಇತರ ಠಾಣೆಗಳಲ್ಲಿ ದಾಖಲಾಗಿರುವ ಸಂಬಂಧಿತ ಪ್ರಕರಣಗಳನ್ನೂ ತನಿಖೆ ನಡೆಸುತ್ತಿದ್ದಾರೆ.
ಈಗ ಎಸ್ಐಟಿ ನಡೆಸುತ್ತಿರುವ ದಾಳಿಗಳು ಹಾಗೂ ಪರಿಶೀಲನೆಗಳಿಂದ ನಕಲಿ ಔಷಧ ಜಾಲದ ಹಿಂದೆ ಯಾರಿದ್ದಾರೆ? ಔಷಧಗಳು ಎಲ್ಲಿಂದ ಬರುತ್ತಿದ್ದವು? ಯಾವ ಮಾರ್ಗದಲ್ಲಿ ಆಸ್ಪತ್ರೆ–ಫಾರ್ಮಸಿಗಳಿಗೆ ತಲುಪುತ್ತಿದ್ದವು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆಯಿದೆ.
ನಕಲಿ ಔಷಧ ದಂಧೆಯ ಬೇರುಬಿಡಿಸಲು ಎಸ್ಐಟಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆ ಇದೆ.