ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಖತ್ತಿ ಹಿಡಿದುಕೊಂಡು ವಿಡಿಯೋ ಮಾಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿಯ ಈಶ್ವರನಗರದ ಗಂಗಾಧರ ಮಡಿವಾಳರ ಬಂಧಿತ ಆರೋಪಿ. ಆರೋಪಿ ತನ್ನದೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೈಯಲ್ಲಿ ಖತ್ತಿ ಹಿಡಿದುಕೊಂಡಿರುವ ವಿಡಿಯೋ ಹಾಗೂ ಚಿತ್ರಗಳನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿರುವ ಪೊಲೀಸರು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.