ಧಾರವಾಡ: ಜಮೀನು ವಿವಾದದ ಕಿಡಿ ಇದೀಗ ಗುಂಡಿನ ಸದ್ದಿಗೆ ತಿರುಗಿರುವ ಘಟನೆ ಧಾರವಾಡದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಐದು ಎಕರೆ ಜಮೀನಿನ ವಿಚಾರವಾಗಿ ನಡೆದ ವೈಷಮ್ಯ ಹಿನ್ನೆಲೆ ದುಷ್ಕರ್ಮಿಗಳು ಯುವಕನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಧಾರವಾಡ ಹೊರವಲಯದ ತ್ರಿಬಲ್ ಐಟಿ ಸಮೀಪ ನಡೆದಿದೆ.
ಗಾಯಾಳುವನ್ನು ವಿಠಲ್ ವಾಲಿಕಾರ(24) ಎಂದು ಗುರುತಿಸಲಾಗಿದ್ದು, ಆತ ಹೊಲಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಿಂದ ಬಂದಿದ್ದ ಗ್ಯಾಂಗ್, ಕಂಟ್ರಿ ಪಿಸ್ತೂಲ್ ಬಳಸಿ ವಿಠಲ್ ಕಾಲಿಗೆ ಗುಂಡು ಹಾರಿಸಿದೆ ಎಂಬ ಆರೋಪ ಕೇಳಿಬಂದಿದೆ.
https://www.instagram.com/reel/DYy_3IcvL3y/?igsh=Z2Y0dTl2bXkxNjE3
ಗುಂಡೇಟಿನಿಂದ ಗಾಯಗೊಂಡ ವಿಠಲ್ರನ್ನು ತಕ್ಷಣ ಧಾರವಾಡ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.
ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸಂಬಂಧ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಒಟ್ಟಿನಲ್ಲಿ ಜಮೀನು ವಿವಾದಗಳು ಇದೀಗ ಮಾರಕ ಹಂತ ತಲುಪುತ್ತಿದ್ದು, ಸಾರ್ವಜನಿಕರಲ್ಲೂ ಆತಂಕ ಮೂಡಿಸಿದೆ. ಧಾರವಾಡದಲ್ಲಿ ನಡೆದ ಈ ಗುಂಡಿನ ದಾಳಿ ಪ್ರಕರಣ ನಗರದಲ್ಲಿ ಸಂಚಲನ ಸೃಷ್ಟಿಸಿದೆ.