ಹುಬ್ಬಳ್ಳಿಯ ವಿದ್ಯಾನಗರ ಭಾಗದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ನಡೆದಿದ್ದ ಸರಣಿ ಲ್ಯಾಪ್ಟಾಪ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ವಿದ್ಯಾರ್ಥಿಗಳಂತೆ ಕಾಲೇಜ್ ಹಾಗೂ ಪಿಜಿಗಳಿಗೆ ಎಂಟ್ರಿ ಕೊಟ್ಟು, ಸೆಕ್ಯೂರಿಟಿ ಗಾರ್ಡ್ ಕಣ್ಣಿಗೆ ಮಣ್ಣು ಎರಚಿ ಲಕ್ಷಾಂತರ ರೂಪಾಯಿ ಮೌಲ್ಯದ ಲ್ಯಾಪ್ಟಾಪ್ ಕಳ್ಳತನ ಮಾಡಿದ್ದ ಇಬ್ಬರು ಅಂತರ ಜಿಲ್ಲಾ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು… ವಿದ್ಯಾನಗರ ಭಾಗದ ಬಿವಿಬಿ ಕಾಲೇಜ್ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳ ಪಿಜಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಖದೀಮರು, ಹಾಡು ಹಗಲೇ ವಿದ್ಯಾರ್ಥಿಗಳಂತೆ ಬಂದು ಕಳ್ಳತನ ನಡೆಸಿದ್ದರು. ಕಾಲೇಜ್ ಹಾಗೂ ಪಿಜಿಗಳಲ್ಲಿ ಇಟ್ಟಿದ್ದ ಒಟ್ಟು 9 ಲ್ಯಾಪ್ಟಾಪ್ ಹಾಗೂ ಮೊಬೈಲ್ ಗಳನ್ನು ಕದ್ದೊಯ್ದು ಎಸ್ಕೇಪ್ ಆಗಿದ್ದರು.

ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಯಿತು. ಪಿಎಸ್ಐ ಪುನೀತ್ ಕುಮಾರ್, ಸುನೀಲ್ ಎಂ ಹಾಗೂ ಕ್ರೈಮ್ ಸಿಬ್ಬಂದಿಗಳಾದ ಪರಶುರಾಮ ಹಿರಗನ್ನವರ, ಶಿವಾನಂದ ತಿರುಕಣ್ಣವರ, ಅನಿಲ ಹುಗ್ಗಿ, ಅರುಣ ಹೊಸಗೌಡರ, ಸಂತೋಷ್ ಆಡ್ನೂರ್, ಬಸವರಾಜ್ ಭಾವಿಹಾಳ ರಾಕೇಶ್ ಬಟಕುರ್ಕಿ ಹಾಗೂ ಶರಣಗೌಡ ಮೂಲಿಮನಿ ನೇತೃತ್ವದ ತಂಡ ಆರೋಪಿಗಳ ಬೆನ್ನಟ್ಟಿತ್ತು.
ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್ ಟ್ರ್ಯಾಕಿಂಗ್ ಆಧರಿಸಿ ಪೊಲೀಸರು ಆಂಧ್ರಪ್ರದೇಶಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ, ಕೊನೆಗೂ ವೆಂಕಟಗಿರಿ ಕೋಟಾ ನಿವಾಸಿಗಳಾದ ಸತ್ಯವೇಲು ಚೌಡೇಪಲ್ಲಿ ಹಾಗೂ ಸರವಣ ಚೌಡೇಪಲ್ಲಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಸುಮಾರು 5 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ 6 ಲ್ಯಾಪ್ಟಾಪ್ಗಳು ಹಾಗೂ 13 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಭೇದಿಸಿದ ವಿದ್ಯಾನಗರ ಪೊಲೀಸರ ಕಾರ್ಯವೈಖರಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ವಿದ್ಯಾರ್ಥಿಗಳ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿಕೊಂಡು ನಡೆಯುತ್ತಿದ್ದ ಕಳ್ಳತನ ಪ್ರಕರಣಕ್ಕೆ ವಿದ್ಯಾನಗರ ಪೊಲೀಸರು ಬ್ರೇಕ್ ಹಾಕಿದ್ದು, ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವ ಮೂಲಕ ಮಹತ್ವದ ಯಶಸ್ಸು ಸಾಧಿಸಿದ್ದಾರೆ.