ಹುಬ್ಬಳ್ಳಿ: ಮನೆ ಮುಂದೆ ಜೋರಾಗಿ ಬೈಕ್ ಚಾಲನೆ ಮಾಡಿದ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರ ಮೇಲೆ ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಗಂಗಪ್ಪ ಕೊರವರ ಎಂದು ಗುರುತಿಸಲಾಗಿದೆ. ಮನೆ ಮುಂದೆ ಜೋರಾಗಿ ಬೈಕ್ ಚಾಲನೆ ಮಾಡುತ್ತಿದ್ದ ವಿಚಾರಕ್ಕೆ ಗಂಗಪ್ಪ ಹಾಗೂ ಆತನ ಸಂಬಂಧಿಕರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಬಳಿಕ ಪ್ರಕರಣ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸಂಬಂಧಿಕರು ಗಂಗಪ್ಪನನ್ನು ಹುಡುಕಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಈ ವೇಳೆ ಎಪಿಎಂಸಿ ಬಿಳಿಯ ವಿದ್ಯಾಧಿರಾಜ ಕಾಂಪ್ಲೆಕ್ಸ್ ಬಳಿ ಗಂಗಪ್ಪನನ್ನು ತಡೆದು ತಲ್ವಾರ್ನಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಭರತ್, ಮಣಿಕಂಠ, ನವೀನ್, ಆಸೀಫ್ ಸೇರಿದಂತೆ ಆರು ಮಂದಿ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ತಲ್ವಾರ್ ದಾಳಿಯಿಂದ ಗಂಗಪ್ಪನ ತಲೆ ಹಾಗೂ ಕೈ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆತನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ KIMS ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಹಲ್ಲೆಯಲ್ಲಿ ಭಾಗಿಯಾದವರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.