ಹುಬ್ಬಳ್ಳಿ: ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಘಟನೆ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಘಟನೆ ನಡೆದು ಸುಮಾರು 24 ಗಂಟೆಗಳು ಕಳೆದರೂ ಪ್ರಕರಣ ದಾಖಲಾಗಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಮೂಡಿವೆ.
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ವೆಂಕಟೇಶ ಉಪ್ಪಾರ ಎಂಬ ಪೊಲೀಸ್ ಸಿಬ್ಬಂದಿ ಕರ್ತವ್ಯ ಮುಗಿಸಿಕೊಂಡು ಹುಬ್ಬಳ್ಳಿಯ ನೇಕಾರನಗರದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ನಗರದ ಸಿಲ್ವರ್ ಟೌನ್ ಗೋಕುಲ ರೋಡ್ ನಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಹೋಟೆಲ್ ಒಂದರ ಬಳಿ ವೆಂಕಟೇಶ ಉಪ್ಪಾರ ಅವರ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹಲ್ಲೆಗೆ ಒಳಗಾದ ಪೊಲೀಸ್ ಸಿಬ್ಬಂದಿ ಕೂಡಲೇ ಕಿಮ್ಸ್ ಆಸ್ಪತ್ರೆಗೆ ತೆರಳಿ ಚಿಕಿಸ್ತೆ ಪಡೆದು ಎಂ ಎಲ್ ಸಿ ಮಾಡಿಸಿದ್ದಾನೆ. ಘಟನೆಯ ಬಳಿಕ ಪ್ರಕರಣ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಗೆ ಬಂದಿದ್ದರೂ, 24 ಗಂಟೆಗಳು ಕಳೆದರೂ ಎಫ್ಐಆರ್ ದಾಖಲಾಗಿಲ್ಲ ಎನ್ನಲಾಗಿದೆ. ಇದರಿಂದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆಯೇ ಹಲ್ಲೆ ನಡೆದಿದ್ದರೂ ಪ್ರಕರಣ ದಾಖಲಿಸಲು ವಿಳಂಬವಾಗುತ್ತಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನು ಹಲ್ಲೆ ಆರೋಪ ಎದುರಿಸುತ್ತಿರುವ ಬಿಜೆಪಿ ಕಾರ್ಯಕರ್ತ ಪ್ರಭಾವಿ ಬಿಜೆಪಿ ಶಾಸಕರ ಆಪ್ತರು ಎಂದು ಹೇಳಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆ ಹಾಗೂ ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ವರದಿಯನ್ನು ಆಧರಿಸಿ ತನಿಖೆ ನಡೆಸಬೇಕಾಗಿದೆ.
ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆದಿದೆ ಎನ್ನಲಾಗಿರುವ ಸಂದರ್ಭದಲ್ಲಿ ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿರುವುದಕ್ಕೆ ಕಾರಣವೇನು? ರಾಜಕೀಯ ಪ್ರಭಾವದ ಆರೋಪಗಳಿವೆಯೇ? ಅಥವಾ ತನಿಖೆಯ ಪ್ರಕ್ರಿಯೆಯಿಂದಾಗಿ ಎಫ್ಐಆರ್ ವಿಳಂಬವಾಗಿದೆಯೇ?
ಈ ಎಲ್ಲ ಪ್ರಶ್ನೆಗಳಿಗೆ ಗೋಕುಲ ಠಾಣೆ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.