ಹುಬ್ಬಳ್ಳಿ: 2020ರಲ್ಲಿ ನಡೆದ ಕುಖ್ಯಾತ ರೌಡಿ ಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ‘ಫ್ರೂಟ್ ಇರ್ಫಾನ್’ ಅಲಿಯಾಸ್ ಇರ್ಫಾನ್ ಹಂಚಿನಾಳ ಹತ್ಯೆ ಪ್ರಕರಣ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ.
2020ರ ಆಗಸ್ಟ್ 6ರಂದು ಹುಬ್ಬಳ್ಳಿಯ ಕಾರವಾರ ರಸ್ತೆಯ ಅಲ್-ತಾಜ್ ಹೋಟೆಲ್ ಬಳಿ ಫ್ರೂಟ್ ಇರ್ಫಾನ್ ಹತ್ಯೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬ ಎನ್ನಲಾಗಿರುವ ಹ್ಯಾರಿಸ್ ಪಠಾಣ್ ಮೇಲೆ ಇಂದು ಹಲ್ಲೆ ನಡೆದಿದೆ ಎನ್ನಲಾಗಿದೆ.
ಮದುವೆ ಸಮಾರಂಭಕ್ಕೆ ಬಂದಿದ್ದ ಹ್ಯಾರಿಸ್ ಮೇಲೆ ಏಕಾಏಕಿ ದಾಳಿ
ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗೇರಿಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಹ್ಯಾರಿಸ್ ಪಠಾಣ್ ಭಾಗವಹಿಸಿದ್ದ ವೇಳೆ ಏಕಾಏಕಿ ಕೆಲವರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಫ್ರೂಟ್ ಇರ್ಫಾನ್ ಪುತ್ರ ಅರ್ಬಾಜ್ ಸೇರಿದಂತೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಸದ್ಯ ಕೇಳಿಬರುತ್ತಿದ್ದು, ದಾಳಿಯ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರ ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಘಟನೆಯಿಂದ ಮದುವೆ ಸಮಾರಂಭದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ. ಮಾಹಿತಿ ತಿಳಿದು ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಯಾರು ಭಾಗಿಯಾಗಿದ್ದರು, ಹಲ್ಲೆಗೆ ನಿಖರ ಕಾರಣವೇನು ಹಾಗೂ ಹಳೆಯ ದ್ವೇಷವೇ ದಾಳಿಗೆ ಕಾರಣವಾಯಿತೇ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಹಳೆಯ ಕೊಲೆ ಪ್ರಕರಣ… ಹೊಸ ದಾಳಿ…!
2020ರ ಹತ್ಯೆ ಪ್ರಕರಣದ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಮೇಲೆಯೇ ಇದೀಗ ದಾಳಿ ನಡೆದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇದು ಹಳೆಯ ವೈಷಮ್ಯದ ಮುಂದುವರಿಕೆಯೇ? ಅಥವಾ ಬೇರೆ ಯಾವುದಾದರೂ ಕಾರಣದಿಂದ ದಾಳಿ ನಡೆದಿದೆಯೇ? ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಹ್ಯಾರಿಸ್ ಪಠಾಣ್ ಮೇಲಿನ ದಾಳಿ ಇದೀಗ ಹುಬ್ಬಳ್ಳಿಯ ಕ್ರೈಂ ಸರ್ಕಲ್ನಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ನಿರೀಕ್ಷಿಸಲಾಗಿದೆ.