ಹುಬ್ಬಳ್ಳಿ: ಡಿಜೆ ಮೆರವಣಿಗೆಯಲ್ಲಿ ತಾವು ಹೇಳಿದ ಹಾಡು ಹಾಕಿಲ್ಲ ಎಂಬ ವಿಚಾರಕ್ಕೆ ಡಿಜೆ ಆಪರೇಟರ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಇಬ್ಬರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಕಾಂದಾರ್ ಗಲ್ಲಿಯ ನಿವಾಸಿ ಇಮ್ರಾನ್ ಶಿವಳ್ಳಿ ಹಲ್ಲೆಗೊಳಗಾದ ಡಿಜೆ ಆಪರೇಟರ್. ಕೆಲವು ದಿನಗಳ ಹಿಂದೆ ನಡೆದ ಡಿಜೆ ಮೆರವಣಿಗೆಯಲ್ಲಿ ತಾವು ಕೇಳಿದ ಹಾಡನ್ನು ಇಮ್ರಾನ್ ಹಾಕಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ಅಸಮಾಧಾನಗೊಂಡಿದ್ದ ಆರೋಪಿಗಳು, ಕೆಲ ದಿನಗಳ ಬಳಿಕ ಇಮ್ರಾನ್ ಸಿಕ್ಕಾಗ ಜಗಳ ತೆಗೆದಿದ್ದಾರೆ.
ಸಿಬಿಟಿ ಬಳಿಯ ಪಾನ್ ಶಾಪ್ ಬಳಿ ಇಮ್ರಾನ್ ಜೊತೆ ಜಗಳವಾಡಿ ಬಳಿಕ ಹರಿತವಾದ ವಸ್ತುವಿನಿಂದ ಬೆನ್ನಿಗೆ ಚುಚ್ಚಿ ಗಾಯಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಬಳಿಕ ತ್ವರಿತ ಕಾರ್ಯಾಚರಣೆ ನಡೆಸಿದ ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುಷ್ತಾಕ್ ಅಹ್ಮದ್ ಶೇಖ್ ನೇತೃತ್ವದ ತಂಡ, ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸೆಟಲ್ಮೆಂಟ್ ನಿವಾಸಿಗಳಾದ ದರ್ಶನ ಬಿಜವಾಡ ಹಾಗೂ ಸಾಯಿನಾಥ್ ಬಳ್ಳಾರಿ ಎಂದು ತಿಳಿದುಬಂದಿದೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತ್ವರಿತ ಕಾರ್ಯಾಚರಣೆ ನಡಿಸಿ ಆರೋಪಿಗಳನ್ನು ಬಂಧಿಸಿದ ಶಹರ ಠಾಣೆಯ ಪೋಲಿಸರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಬೊರಸೆ ಭೂಷಣ ಅವರು ಶ್ಲಾಘಿಸಿದ್ದಾರೆ.