ಹುಬ್ಬಳ್ಳಿ: ಅತಿವೇಗವಾಗಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ BRTS ಕಾರಿಡಾರ್ನ ಟ್ರಾಫಿಕ್ ಸಿಗ್ನಲ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹುಬ್ಬಳ್ಳಿಯ ಶ್ರೀನಗರ ಕ್ರಾಸ್ ಬಳಿ ನಡೆದಿದೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಗರ ಕ್ರಾಸ್ ಸಮೀಪದ BRTS ಕಾರಿಡಾರ್ನಲ್ಲಿ ಈ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರ ನಿಯಂತ್ರಣ ಕಳೆದುಕೊಂಡು ಟ್ರಾಫಿಕ್ ಸಿಗ್ನಲ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಧಾರವಾಡ ಮೂಲದ ಪ್ರಣಯ್ ಎಂದು ಗುರುತಿಸಲಾಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಕುರಿತು ಹುಬ್ಬಳ್ಳಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಥಮಿಕವಾಗಿ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವೇಗದ ಹುಚ್ಚಾಟಕ್ಕೆ ಮತ್ತೊಂದು ಅಮಾಯಕ ಜೀವ ಬಲಿ.. ರಸ್ತೆ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.