ಹುಬ್ಬಳ್ಳಿ: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಶ್ರೀ ನಿಸರ್ಗ ಫೌಂಡೇಶನ್ ವತಿಯಿಂದ ವಿಶ್ವ ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ವಿಶೇಷವಾಗಿ, ಪೂಜ್ಯ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ ಬೆಜವಾಡ ಹಾಗೂ ಶ್ರೀ ಶಶಿಕಾಂತ ಬೆಜವಾಡ ಅವರು ಪೌರಕಾರ್ಮಿಕರಾದ ಶ್ರೀ ಹಾಲಪ್ಪ ಎಂಟುಮಣಿ ಹಾಗೂ ಶ್ರೀಮತಿ ಪಕ್ಕೀರವ್ವ ಕಡಕೋಳ ಅವರ ಪಾದಪೂಜೆ ನೆರವೇರಿಸಿ, ಅವರ ನಿಸ್ವಾರ್ಥ ಸೇವೆಗೆ ಗೌರವ ಹಾಗೂ ಕೃತಜ್ಞತೆ ಸಲ್ಲಿಸಿದರು.

ನಗರದ ಸ್ವಚ್ಛತೆಗಾಗಿ ಪ್ರತಿನಿತ್ಯ ತಮ್ಮ ಶ್ರಮ ಮತ್ತು ಬೆವರನ್ನು ಅರ್ಪಿಸುವ ಪೌರಕಾರ್ಮಿಕರ ಸೇವೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 200ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ನೋಟ್ಬುಕ್ ಹಾಗೂ ಪೆನ್ನುಗಳನ್ನು ವಿತರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಬಿ. ನಗರ ಸಮಾಜದ ಅಧ್ಯಕ್ಷರಾದ ಶ್ರೀ ಕೆಂಪಣ್ಣವರ, ಶ್ರೀ ಬಸ್ಸಪ್ಪ ಮಾದರ, ಶ್ರೀ ನಾಗಪ್ಪ ಗೆಜ್ಜೆಳ್ಳಿ, ಶ್ರೀ ಸಿದ್ದಪ್ಪ ಶಿರವಾರ, ಶ್ರೀ ಮರೆಪ್ಪ ರಾಮಯ್ಯನವರ ಸೇರಿದಂತೆ ನಿಸರ್ಗ ಫೌಂಡೇಶನ್ನ ಪದಾಧಿಕಾರಿಗಳು, ಗುರುಹಿರಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

“ನಾವು ಸ್ವಚ್ಛವಾಗಿ ಬದುಕಲು ಅವರು ಪ್ರತಿದಿನ ಶ್ರಮಿಸುತ್ತಾರೆ. ಅವರ ಶ್ರಮವನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ” ಎಂಬ ಸಂದೇಶದೊಂದಿಗೆ ಪೌರಕಾರ್ಮಿಕರ ಸೇವೆಗೆ ಗೌರವ ಸಲ್ಲಿಸಲಾಯಿತು.
ನಗರದ ಸ್ವಚ್ಛತೆ ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಂತಿರುವ ಪೌರಕಾರ್ಮಿಕರನ್ನು ‘ಸ್ವಚ್ಛತೆಯ ಸೈನಿಕರು’ ಎಂದು ಗೌರವಿಸುವ ಮೂಲಕ, ಅವರ ಸೇವೆಯ ಮಹತ್ವವನ್ನು ಸಮಾಜಕ್ಕೆ ಸಾರಲಾಯಿತು.