ಹುಬ್ಬಳ್ಳಿ: ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಕಿರಣ್ ಕುಮಾರ್ ಬೈಂದೂರ್ ಅವರ ಮನೆ ಸೇರಿದಂತೆ ನಾಲ್ಕು ಕಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ನಲ್ಲಿರುವ ಕಿರಣ್ ಕುಮಾರ್ ಅವರ ಮನೆ ಹಾಗೂ ತಬೀಬ್ ಲ್ಯಾಂಡ್ನಲ್ಲಿರುವ ಹೆಸ್ಕಾಂ ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಿರಣ್ ಕುಮಾರ್ ಅವರ ಪತ್ನಿ ಪ್ರೀತಿ ಕೂಡ ಎಂಜಿನಿಯರ್ ಆಗಿದ್ದು, ಹೆಸ್ಕಾಂನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕೆಲಸ ಮಾಡುತ್ತಿರುವ ಗೋಪನಕೊಪ್ಪ ಹೆಸ್ಕಾಂ ಕಚೇರಿ ಹಾಗೂ ಕಿರಣ್ ಕುಮಾರ್ ಅವರ ಸಹೋದರನ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಒಟ್ಟು ನಾಲ್ಕು ಕಡೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ದಾಖಲೆಗಳು ಹಾಗೂ ವಿವಿಧ ಕಡತಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ಕುರಿತು ಲೋಕಾಯುಕ್ತ ಡಿವೈಎಸ್ಪಿ ಬಸವರಾಜ್ ಬುದ್ನಿ ಮಾಹಿತಿ ನೀಡಿದ್ದು, ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.