ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಗುಲಬರಾವ್ ಅವರೊಂದಿಗೆ NDPS ಪ್ರಕರಣದ ಆರೋಪಿ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯೊಬ್ಬ ಇರುವ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ನಾಗರಿಕರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಶುಭಾಶಯ ಕೋರಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ, ಅಪರಾಧ ಹಿನ್ನೆಲೆ ಹೊಂದಿರುವ ಕೆಲವು ವ್ಯಕ್ತಿಗಳು ಕೂಡ ಕಚೇರಿಗೆ ಭೇಟಿ ನೀಡಿ ಛಾಯಾಚಿತ್ರ ತೆಗೆಸಿಕೊಂಡಿರುವುದು ನಂತರ ಗಮನಕ್ಕೆ ಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
“ಅಂತಹ ವ್ಯಕ್ತಿಗಳ ಭೇಟಿ ಅಥವಾ ಅವರೊಂದಿಗೆ ತೆಗೆಸಿಕೊಂಡಿರುವ ಛಾಯಾಚಿತ್ರಗಳನ್ನು ಪೊಲೀಸ್ ಇಲಾಖೆಯೊಂದಿಗಿನ ಯಾವುದೇ ರೀತಿಯ ಸಂಬಂಧವೆಂದು ಅರ್ಥೈಸಬಾರದು” ಎಂದು ಭೂಷಣ್ ಬೋರಸೆ ಗುಲಬರಾವ್ ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿನ ಶುಭಾಶಯ ಭೇಟಿಯ ವೇಳೆ ವಿವಿಧ ವ್ಯಕ್ತಿಗಳು ಛಾಯಾಚಿತ್ರ ತೆಗೆಸಿಕೊಂಡಿರುವುದನ್ನು ಆಧಾರವಾಗಿಸಿಕೊಂಡು ಪೊಲೀಸ್ ಇಲಾಖೆ ಅಥವಾ ಆಯುಕ್ತರೊಂದಿಗೆ ಯಾವುದೇ ರೀತಿಯ ಸಂಬಂಧವಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಬದ್ಧ.
ಇದೇ ವೇಳೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಅಪರಾಧ ಹಾಗೂ ಅಪರಾಧಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ನಿಷ್ಪಕ್ಷಪಾತವಾಗಿ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಬದ್ಧರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕಟಣೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಛಾಯಾಚಿತ್ರಗಳ ಕುರಿತು ಉಂಟಾಗಿರುವ ಗೊಂದಲಕ್ಕೆ ಪೊಲೀಸ್ ಆಯುಕ್ತರು ತೆರೆ ಎಳೆದಿದ್ದಾರೆ.