ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಭೂಷಣ್ ಬೋರಸೆ ಅವರಿಗೆ ಸನ್ಮಾನ ಸಲ್ಲಿಸಿದವರ ಪೈಕಿ ಎನ್ಡಿಪಿಎಸ್ ಪ್ರಕರಣದ ಆರೋಪಿ ಎನ್ನಲಾದ ವ್ಯಕ್ತಿ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿ ಎನ್ನಲಾದ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಭೂಷಣ್ ಬೋರಸೆ ಅವರು ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಕೆಲವರು ಕಚೇರಿಗೆ ಆಗಮಿಸಿ ಹೂಗುಚ್ಛ ನೀಡಿ ಶುಭಕೋರಿರುವುದು ಫೋಟೋಗಳಲ್ಲಿ ಕಂಡುಬಂದಿದೆ. ಈ ಪೈಕಿ ಖೇತ್ಸಿಂಗ್ ರಾಜಪುರೋಹಿತ್ ಎಂಬಾತನ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದಾಗಿ ಹೇಳಲಾಗುತ್ತಿದ್ದು, ಮತ್ತೊಬ್ಬ ವ್ಯಕ್ತಿ ಅಮಿತ್ ಬದ್ದಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ವರದಿಯಾಗಿದೆ.

ಆದರೆ, ಈ ಇಬ್ಬರು ಸೇರಿದಂತೆ ಇಂತಹ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಪೊಲೀಸ್ ಆಯುಕ್ತರ ಕಚೇರಿಗೆ ಪ್ರವೇಶಿಸಿ ನೂತನ ಆಯುಕ್ತರನ್ನು ನೇರವಾಗಿ ಭೇಟಿಯಾಗಿ ಸನ್ಮಾನಿಸಲು ಅವಕಾಶ ದೊರೆತದ್ದು ಹೇಗೆ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಹೊಸದಾಗಿ ಅಧಿಕಾರ ಸ್ವೀಕರಿಸುವ ಪೊಲೀಸ್ ಅಧಿಕಾರಿಗೆ ನಗರದ ಪ್ರತಿಯೊಬ್ಬ ವ್ಯಕ್ತಿಯ ಹಿಂದಿನ ಪ್ರಕರಣಗಳ ಮಾಹಿತಿ ತಕ್ಷಣಕ್ಕೆ ತಿಳಿದಿರಲು ಸಾಧ್ಯವಿಲ್ಲ. ಆದರೆ, ಆಯುಕ್ತರ ಕಚೇರಿಯ ಸಿಬ್ಬಂದಿಗೆ ಇಂತಹ ವ್ಯಕ್ತಿಗಳ ಹಿನ್ನೆಲೆ ಕುರಿತು ಮಾಹಿತಿ ಇರಲಿಲ್ಲವೇ? ಅಥವಾ ಗೊತ್ತಿದ್ದರೂ ಅವರನ್ನು ಒಳಗೆ ಬಿಡಲಾಯಿತೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳೊಂದಿಗೆ ಪರಿಚಯ ಬೆಳೆಸಿಕೊಳ್ಳಲು ಹಾಗೂ ಪ್ರಭಾವ ಬೀರುವ ಉದ್ದೇಶದಿಂದ ಕೆಲವರು ಸನ್ಮಾನ, ಹೂಗುಚ್ಛದಂತಹ ಕಾರ್ಯಕ್ರಮಗಳನ್ನು ಬಳಸಿಕೊಳ್ಳುವುದು ಹೊಸದೇನಲ್ಲ. ಆದರೆ, ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿರುವವರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಂದಿಗೆ ಇಂತಹ ರೀತಿಯಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಇನ್ನೊಂದೆಡೆ, ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂದೇಶ ನೀಡಿದ್ದ ನೂತನ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಇದೀಗ ಡ್ರಗ್ಸ್ ಪ್ರಕರಣದ ಆರೋಪಿಯೆಂದು ಹೇಳಲಾಗುತ್ತಿರುವ ವ್ಯಕ್ತಿಯಿಂದಲೇ ಸನ್ಮಾನ ಸ್ವೀಕರಿಸಿರುವ ಫೋಟೋಗಳು ವೈರಲ್ ಆಗಿರುವುದು ಚರ್ಚೆಗೆ ಕಾರಣವಾಗಿದೆ.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, “ಪೊಲೀಸ್ ಆಯುಕ್ತರ ಕಚೇರಿಗೆ ಇಂತಹ ಹಿನ್ನೆಲೆ ಹೊಂದಿರುವವರು ಪ್ರವೇಶಿಸಿದ್ದು ಹೇಗೆ?”, “ಸನ್ಮಾನಕ್ಕೆ ಅವಕಾಶ ನೀಡುವ ಮುನ್ನ ಅವರ ಹಿನ್ನೆಲೆ ಪರಿಶೀಲನೆ ನಡೆದಿರಲಿಲ್ಲವೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..
ಒಟ್ಟಿನಲ್ಲಿ ನೂತನ ಆಯುಕ್ತರ ಕಚೇರಿಯಲ್ಲೇ ನಡೆದ ಈ ಬೆಳವಣಿಗೆಗೆ ಪೊಲೀಸ್ ಇಲಾಖೆ ಯಾವ ಸ್ಪಷ್ಟನೆ ನೀಡಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.